ಶವಸಂಸ್ಕಾರ -  	ಮೃತ ಮಾನವ ಶರೀರಕ್ಕೆ ಆತನ ಬಂಧು, ಬಳಗದವರು ನೆರವೇರಿಸುವ ಅಂತ್ಯಕ್ರಿಯಾಚರಣೆ (ಬರಿಯಲ್ ಸೆರಮನಿ). ಶವಸಂಸ್ಕಾರಕ್ಕೆ ಸಂಬಂಧಪಟ್ಟ ವಿವಿಧ ರೀತಿಯ ಆಚರಣೆಗಳು ಪ್ರಪಂಚದ ಎಲ್ಲ ಧಾರ್ಮಿಕ ಗುಂಪುಗಳಿಗೆ ಸೇರಿದ ಜನರಲ್ಲೂ ಆದಿವಾಸಿಗಳಲ್ಲೂ ಕಂಡುಬರುತ್ತವೆ. ಸತ್ತ ಮನುಷ್ಯನ ಆತ್ಮವನ್ನು ಸತ್ತವರ ಲೋಕಕ್ಕೆ ಸೇರಿಸುವ ನಂಬಿಕೆ ಈ ಸಂಸ್ಕಾರಗಳ ಹಿಂದೆ ಇದೆ. ಇವನ್ನು ರೂಪಿಸುವಲ್ಲಿ ಜಾತಿ ಮತ್ತು ಧರ್ಮಗಳು ಪ್ರಮುಖ ಅಂಗಗಳಾದರೂ ಮೃತ ವ್ಯಕ್ತಿಯ ಲಿಂಗ, ವಯಸ್ಸು ಮತ್ತು ಸಾಮಾಜಿಕ ಸ್ಥಾನಮಾನಗಳು ಗಣನೀಯ ಪ್ರಭಾವ ಬೀರುತ್ತವೆ. ಪ್ರಾಚೀನ ಈಜಿಪ್ಟ್‍ನಲ್ಲಿ, ಗ್ರೀಕ್‍ನಲ್ಲಿ ಶವಸಂಸ್ಕಾರಕ್ಕೆ ಅತ್ಯಂತ ಮಹತ್ತ್ವ ನೀಡಲಾಗುತ್ತಿತ್ತು. ಫೆರೋ ದೊರೆಗಳ ಸಂಸ್ಕಾರ ಕ್ರಿಯೆಯಂತೂ ವಿಶಿಷ್ಟವಾದದ್ದೆಂಬ ವಿಚಾರ ತಿಳಿದಿರುವಂಥದ್ದೇ. ಗ್ರೀಕರಲ್ಲಿಯೂ ಅಂತ್ಯಕ್ರಿಯೆ ಅತ್ಯಂತ ಗೌರವಪೂರ್ವಕವಾಗಿ ನಡೆಯುವ ಒಂದು ಸಂಸ್ಕಾರವಾಗಿತ್ತು.

	ಮರಣಾನಂತರ ಆತ್ಮದ ಅಸ್ತಿತ್ವದ ಬಗ್ಗೆ ವಿವಿಧ ಜನಸಮುದಾಯಗಳಲ್ಲಿ ಅನೇಕ ರೀತಿಯ ನಂಬಿಕೆಗಳು ಪ್ರಚಲಿತದಲ್ಲಿವೆ. ಮನುಷ್ಯನ ದೇಹ ಮತ್ತು ಆತ್ಮಗಳ ಬಗ್ಗೆ ಹಲವು ನಂಬಿಕೆಗಳನ್ನು ಕಾಣಬಹುದು. ಇವುಗಳ ಆಧಾರದ ಮೇಲೆ ಆಯಾ ಜನರು ಆಚರಿಸುವ ಶವಸಂಸ್ಕಾರ ವಿಧಿಗಳು ರೂಪಿತವಾಗಿರುತ್ತವೆ. ಮರಣಹೊಂದಿದ ವ್ಯಕ್ತಿಯ ಹತ್ತಿರದ ಸಂಬಂಧಿಗಳು ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಮೃತ ವ್ಯಕ್ತಿಯ ಸಮೀಪದ ಬಂಧುಗಳನ್ನು ಪ್ರತ್ಯೇಕಿಸುವ ಮತ್ತು ಅವರ ಅಶುದ್ಧತಾ ಸ್ಥಿತಿಯನ್ನು ತೋರ್ಪಡಿಸುವ ಕೆಲವು ಆಚರಣೆಗಳು ಈ ಹಂತದಲ್ಲಿ ಕಂಡುಬರುತ್ತವೆ. ಮರಣಹೊಂದಿದ ವ್ಯಕ್ತಿಯ ದೃಷ್ಟಿಯಿಂದ ಇದೊಂದು ಪರಿವರ್ತನಾ ಹಂತ. ಇದನ್ನು ಒಂದು ಸಂಧಿಕಾಲವೆಂದೂ ಹೇಳಬಹುದು. ಮರಣಕಾಲ ದಿಂದ ಪರಲೋಕವನ್ನು ಸೇರುವವರೆಗಿನ ಈ ಕಾಲ ಎಲ್ಲ ಸಂಬಂಧಿಕರಿಗೂ ಸಂಧಿಕಾಲ. ಅವರೆಲ್ಲರೂ ತಮ್ಮ ಸಹಜ ಜೀವನದಿಂದ ಬೇರೆಯಾಗಿ, ಅನೇಕ ವಿಧಿಗಳಲ್ಲಿ ಭಾಗವಹಿಸಿ, ಶೋಕಾಚರಣೆಯನ್ನು ಮಾಡುವರು. ಈ ಅವಧಿಯಲ್ಲಿ ಸತ್ತ ವ್ಯಕ್ತಿ ಮತ್ತು ಶೋಕವನ್ನಾಚರಿಸುತ್ತಿರುವ ಜನರು ಒಂದು ವಿಶೇಷ ಗುಂಪನ್ನು ಸೃಷ್ಟಿಸುತ್ತಾರೆ. ಶೋಕಾಚರಣೆಯ ಅವಧಿ ಎಲ್ಲ ಸಂಬಂಧಿಕರಿಗೂ ಒಂದೇ ಆಗಿರುವುದಿಲ್ಲ. ಸತ್ತ ವ್ಯಕ್ತಿಯೊಂದಿಗಿನ ಸಾಮೀಪ್ಯತೆಯನ್ನು ಅನುಸರಿಸಿ ಇದು ಬದಲಾಗುತ್ತದೆ. ವಿಧುರ, ವಿಧವೆ ಅಥವಾ ಮಕ್ಕಳಿಗೆ ಈ ಅವಧಿ ದೀರ್ಘವಾಗಿರುತ್ತದೆ.

	ಶೋಕಾಚರಣೆಗೆ ಸಂಬಂಧಿಸಿದ ವಿಧಿಗಳನ್ನು ಬೇರ್ಪಡಿಸುವ ವಿಧಿ ಮತ್ತು ಪುನರಾಗಮನದ ವಿಧಿಗಳೆಂದು ಎರಡು ರೀತಿಯಾಗಿ ವಿಂಗಡಿಸ ಬಹುದು. ಸಾವು ಬಂದಾಕ್ಷಣ ಸಂಬಂಧಿಸಿದ ವ್ಯಕ್ತಿಗಳು ತಮ್ಮನ್ನು ಸಾಮಾನ್ಯ ಜೀವನದಿಂದ ಬೇರ್ಪಡಿಸಿಕೊಂಡು ಹೊಸ ಗುಂಪಿನ ಸದಸ್ಯರಾಗುವ ವಿಧಿಗಳನ್ನು ಬೇರ್ಪಡಿಸುವ ವಿಧಿಗಳೆಂದು ಹೇಳಬಹುದು. ಅನಂತರ ಅವರು ಶೋಕಾಚರಣೆಗೆ ಅರ್ಹರಾಗಿರುತ್ತಾರೆ. ಶೋಕಾಚರಣೆಯಲ್ಲಿ ಭಾಗವಹಿಸಿದ ಎಲ್ಲ ವ್ಯಕ್ತಿಗಳೂ ತಮ್ಮ ಸಹಜ ಜೀವನಕ್ಕೆ ಹಿಂತಿರುಗುವ ಕ್ರಿಯೆಯನ್ನು ಪುನರಾಗಮನ ವಿಧಿಗಳೆಂದು ಹೇಳಬಹುದು. ಈ ಸಂಧಿಕಾಲ ಅಥವಾ ಸೂತಕದ ಕಾಲ ಕೆಲವು ದಿನಗಳ, ತಿಂಗಳುಗಳ ಅಥವಾ ವರ್ಷಗಳವರೆಗೆ ಇರಬಹುದು. ಸತ್ತ ವ್ಯಕ್ತಿ ಪರಲೋಕ ಸೇರಲು ದೂರ ಪ್ರಯಾಣ ಮಾಡಬೇಕೆಂಬ ನಂಬಿಕೆಯಿರುವುದರಿಂದಲೇ ಈ ಶೋಕಾಚರಣೆಯ ಅವಧಿ ದೀರ್ಘವಾಗಿರುತ್ತದೆ. ಅಲ್ಲದೆ ಈ ಅವಧಿಯಲ್ಲಿ ಅನೇಕ ವಿಧಿಗಳನ್ನು ಆಚರಿಸಲಾಗುವುದು. ವಿವಿಧ ಜನಸಮುದಾಯಗಳಲ್ಲಿ ಇದು ವಿವಿಧ ರೀತಿಯಲ್ಲಿ ಕಂಡುಬರುತ್ತದೆ.

	ಹಿಂದುಗಳ ಶವಸಂಸ್ಕಾರದ ವಿಧಿಗಳು: ಶವವನ್ನು ಸುಡುವ ಇಲ್ಲವೆ ಹೂಳುವ ಪದ್ಧತಿ ಉಂಟು. ಮರಣಕ್ಕೆ ಸಂಬಂಧಿಸಿದ ನಂಬಿಕೆಗಳು ಮತ್ತು ಶವಸಂಸ್ಕಾರಕ್ಕೆ ಸಂಬಂಧಿಸಿದ ಆಚರಣೆಗಳು ವೈವಿಧ್ಯಮಯ ವಾಗಿವೆ. ಆದಿವಾಸಿಗಳಲ್ಲಿ ಈ ವಿಭಿನ್ನತೆಯನ್ನು ಹೆಚ್ಚಾಗಿ ಕಾಣಬಹುದು. ಲಿಂಗಾಯತ ಸಮೂಹಗಳಲ್ಲಿ ಇದು ಭಿನ್ನವಾಗಿದೆ. ಹಿಂದುಗಳಲ್ಲಿ ಅನೇಕ ಸಮುದಾಯ ಮತ್ತು ಪಂಥಗಳು ಇರುವುದರಿಂದ ವೈವಿಧ್ಯ ಹುಟ್ಟಿಕೊಂಡಿವೆ. ಹೆಚ್ಚಿನ ಹಿಂದುಗಳು ವೈದಿಕ ಸಂಪ್ರದಾಯಗಳನ್ನು ರೂಢಿಸಿಕೊಂಡಿದ್ದಾರೆ. ಅನೇಕ ಸಾಮಾನ್ಯ ಅಂಶಗಳನ್ನೂ ಕಾಣಬಹುದು.

	ವ್ಯಕ್ತಿ ಮರಣಹೊಂದಿದ ಕೂಡಲೇ ಒಂದು ದೀಪವನ್ನು ಉರಿಸಿ ಮೃತದೇಹದ ಹತ್ತಿರವಿಡುತ್ತಾರೆ. ಮೃತವ್ಯಕ್ತಿಯ ತಲೆ ಉತ್ತರಾಭಿಮುಖ ವಾಗಿರುವಂತೆ ದೇಹವನ್ನು ಇಡಲಾಗುವುದು. ಕಣ್ಣುಗಳನ್ನು ಮುಚ್ಚಿ, ಎರಡೂ ಪಾದಗಳನ್ನು ಸೇರಿಸಿ ಕಟ್ಟಲಾಗುವುದು. ಶವಸಂಸ್ಕಾರ ಮಾಡುವ ಅಧಿಕಾರ ಹಿರಿಯ ಮಗನಿಗಿರುತ್ತದೆ. ಮೃತದೇಹಕ್ಕೆ ಸ್ನಾನಮಾಡಿಸಿ ಹೊಸ ಬಿಳಿಬಟ್ಟೆ ತೊಡಿಸಲಾಗುತ್ತದೆ. ಕುಟುಂಬದ ಎಲ್ಲ ಸದಸ್ಯರು ಹೆಣದ ಹಣೆಗೆ ಎಣ್ಣೆ ಹಚ್ಚುವರು. ಹೂವು, ಹಾರಗಳಿಂದ ಅಲಂಕೃತಗೊಂಡ ಮೃತದೇಹವನ್ನು ಅನಂತರ ಚಟ್ಟದ ಮೇಲಿಟ್ಟು ಶ್ಮಶಾನಕ್ಕೆ ಒಯ್ಯುವರು. ಮೃತವ್ಯಕ್ತಿಯ ಗಂಡು ಮಕ್ಕಳು ಮತ್ತು ಇತರ ಪುರುಷ ಸಂಬಂಧಿಕರು ದೇಹವನ್ನು ಶ್ಮಶಾನಕ್ಕೆ ಸಾಗಿಸುವರು. ಬ್ರಾಹ್ಮಣ, ಕ್ಷತಿಯ, ವೈಶ್ಯರಲ್ಲಿ ಹೆಂಗಸರು ಶ್ಮಶಾನಕ್ಕೆ ಹೋಗುವುದು ನಿಷಿದ್ಧ. ಶ್ಮಶಾನದಲ್ಲಿ ದೇಹ ಇಟ್ಟಮೇಲೆ, ಹಿರಿಯ ಮಗ ಒಂದು ನಾಣ್ಯವನ್ನು ಹೆಣದ ಹಣೆಯ ಮೇಲಿಟ್ಟು ದೇಹದ ಏಳು ಭಾಗಗಳಿಗೆ ತುಪ್ಪ ಹಚ್ಚುತ್ತಾನೆ. ಅಕ್ಕಿ ಮತ್ತು ಎಳ್ಳನ್ನು ಹೆಣದ ಬಾಯಲ್ಲಿ ಹಾಕಿ, ಅನಂತರ ದೇಹದ ಮೇಲೆ ಸೌದೆ ಜೋಡಿಸಲಾಗುವುದು. ಅದರ ಮೇಲೆ ತುಪ್ಪ ಸುರಿದು, ಹಿರಿಯ ಮಗ ತನ್ನ ಹೆಗಲ ಮೇಲೆ ತೂತುಗಳಿರುವ ಮಡಕೆಯಲ್ಲಿ ನೀರು ತುಂಬಿಸಿ ಹೆಣದ ಸುತ್ತಲೂ ಏಳು ಬಾರಿ ಬಲದಿಂದ ಎಡಕ್ಕೆ ಸುತ್ತು ಹಾಕುತ್ತಾನೆ. ಕೊನೆಗೆ ಮಡಕೆಯನ್ನು ಒಡೆಯುತ್ತಾನೆ. ಪುರೋಹಿತರು ಮಂತ್ರ ಪಠನ ಮಾಡುತ್ತಾ ಎಲ್ಲ ವಿಧಿಗಳನ್ನು ನಿರ್ದೇಶಿಸುವರು. ಕೊನೆಯದಾಗಿ, ಮೃತ ದೇಹದ ಎದೆಭಾಗಕ್ಕೆ ಹಿರಿಯ ಮಗ ಅಗ್ನಿಸ್ಪರ್ಶ ಮಾಡುತ್ತಾನೆ. ಹಿಂದುಗಳು ಸಾಮಾನ್ಯವಾಗಿ ಹನ್ನೊಂದು ದಿನಗಳ ಶೋಕಾಚರಣೆ ಮಾಡುವರು. 3ನೆಯ ಅಥವಾ 5ನೆಯ ದಿನ ಅಸ್ಥಿ ಮತ್ತು ಚಿತಾಭಸ್ಮಗಳನ್ನು ನದಿಗಳಲ್ಲಿ ವಿಸರ್ಜಿಸುವ ಸಂಪ್ರದಾಯ ಹಲವು ಹಿಂದು ಸಮುದಾಯಗಳಲ್ಲಿದೆ.

	ಮುಸ್ಲಿಮ್ ಶವಸಂಸ್ಕಾರ ವಿಧಿಗಳು: ವ್ಯಕ್ತಿ ನಿಧನಹೊಂದಿದಾಗ ನೆರೆದ ಜನರು ಲಿಲಾವ ವ ಇನ್ನ ಇಲ್ಲಾಹ ರಝಯುನ್ (ನಾವು ದೇವರಿಂದ ಬಂದಿದ್ದೇವೆ ಮತ್ತು ದೇವರಲ್ಲಿಗೆ ಹೋಗಲಿದ್ದೇವೆ) ಎಂದು ಪ್ರಾರ್ಥಿಸುತ್ತಾರೆ. ಇಸ್ಲಾಮ್ ಧರ್ಮದ ನಿಯಮದಂತೆ ಯಾರೇ ನಿಧನ ಹೊಂದಿದಾಗಲೂ ದುಃಖ ವ್ಯಕ್ತಪಡಿಸುವುದು ಅಥವಾ ಜೋರಾಗಿ ಅಳುವುದು ನಿಷಿದ್ಧ.  
ನಿಧನ ಹೊಂದಿದ ವ್ಯಕ್ತಿಗೆ ಮೊದಲು ಸ್ನಾನ(ಗುಸ್ಲ್) ಮಾಡಿಸಲಾಗು ವುದು (ನಿಧನಹೊಂದಿದ ವ್ಯಕ್ತಿ ಸ್ತ್ರೀಯಾಗಿದ್ದರೆ ಸ್ತ್ರೀ, ಪುರುಷನಾಗಿದ್ದರೆ ಪುರುಷ ಸ್ನಾನಮಾಡಿಸುತ್ತಾರೆ). ಅನಂತರ ಮೃತದೇಹವನ್ನು ಕಫನ್ ಎಂಬ ಬಿಳಿ ಬಟ್ಟೆಯಿಂದ ಪೂರ್ಣವಾಗಿ ಸುತ್ತುವರು. ಮನೆಯಲ್ಲಿ ಸುಗಂಧ ದ್ರವ್ಯ ಸಿಂಪಡಿಸಿ ಅಗರಬತ್ತಿ ಹಚ್ಚುವರು. ಅನಂತರ ಹೆಣವನ್ನು ಹೊತ್ತು ಶ್ಮಶಾನಕ್ಕೆ ಒಯ್ಯಲಾಗುವುದು. ಎಲ್ಲ ಪುರುಷರೂ ಈ ಅಂತಿಮ ಯಾತ್ರೆಯಲ್ಲಿ ತಮ್ಮ ಹೆಗಲುಕೊಟ್ಟು ಭಾಗವಹಿಸುತ್ತಾರೆ.  ಮೆರವಣಿಗೆಯನ್ನು ಜನಸ್ ಎಂದು ಕರೆಯುವರು. ಈ ಸಮಯದಲ್ಲಿ ಮಾಡುವ ಪ್ರಾರ್ಥನೆಗೆ ದುವಾ ಎನ್ನುವರು. ಶ್ಮಶಾನವನ್ನು ತಲುಪಿದ ಅನಂತರ ಎಲ್ಲರೂ ಸೇರಿ ಮತ್ತೊಮ್ಮೆ ಪ್ರಾರ್ಥನೆ ಮಾಡಿ ಮೃತದೇಹಕ್ಕೆ ಸುಗಂಧ ಭರಿತ ನೀರಿನ್ನು ಸಿಂಪಡಿಸಿ ಮೊದಲೇ ತೋಡಿದ್ದ ಗುಂಡಿಯೊಳಗೆ ಇಳಿಸುವರು. ಮುಸ್ಲಿಮರ ಪವಿತ್ರ ಸ್ಥಳವಾದ ಕಬಾದ ದಿಕ್ಕಿಗೆ ಮೃತದೇಹದ ತಲೆಯನ್ನು ಇಟ್ಟು ಅದರ ಮೇಲೆ ಮರದ ಹಲಗೆ, ಬಿದರಿನ ತುಂಡು ಮತ್ತು ಕಲ್ಲುಗಳನ್ನು ಅಚ್ಚುಕಟ್ಟಾಗಿ ಜೋಡಿಸುವರು. ಅನಂತರ ಎಲ್ಲರೂ ಹಿಡಿ ಮಣ್ಣನ್ನು ಅಥವಾ ಮರಳನ್ನು ಮೃತದೇಹದ ಮೇಲೆ ಹಾಕುವರು. ಕೊನೆಯದಾಗಿ ಎಲ್ಲರೂ ಸೇರಿ ಫತೀಹಾ ಎಂಬ ಪ್ರಾರ್ಥನೆ ಮಾಡಿ ಹಿಂತಿರುಗುವರು.

	ಕ್ರೈಸ್ತ ಶವಸಂಸ್ಕಾರ ವಿಧಿಗಳು: ಮರಣಹೊಂದಿದ ವ್ಯಕ್ತಿಯನ್ನು ಮಂಚದ ಮೇಲೆ ಮಲಗಿಸಿ ಹತ್ತಿರದಲ್ಲೇ ಶಿಲುಬೆ ಇಡುವರು. ಮಂಚದ ಸುತ್ತಲೂ ಮೋಂಬತ್ತಿಯ ದೀಪಗಳನ್ನಿಟ್ಟು ಅಗರಬತ್ತಿ ಹಚ್ಚುವರು. ಸುಗಂಧ ದ್ರವ್ಯಗಳನ್ನು ಮೃತದೇಹದ ಮೇಲೆ ಸಿಂಪಡಿಸುವರು. ಎಲ್ಲ ಆಪ್ತರೂ ಸಂಬಂಧಿಕರೂ ಸೇರಿದಮೇಲೆ ಮೃತದೇಹವನ್ನಿಟ್ಟ ಕೊಠಡಿ ಯಲ್ಲಿ ಪಾದ್ರಿಗಳು ಪ್ರಾರ್ಥನೆ ನಡೆಸಿಕೊಡುವರು. ಅನಂತರ ಮೃತದೇಹಕ್ಕೆ ಸ್ನಾನಮಾಡಿಸಿ ಹೊಸ ಬಟ್ಟೆ ತೊಡಿಸುವರು. ದೇಹವನ್ನು ಶವಪೆಟ್ಟಿಗೆ ಯೊಳಗಿಟ್ಟು ಮನೆಯಿಂದ ಹೊರಗೆ ತರಲಾಗುವುದು. ಎಲ್ಲರೂ ಅಂತಿಮ ನಮನ ಸಲ್ಲಿಸುವರು. ಮೃತವ್ಯಕ್ತಿಯ ಕೈಗಳನ್ನು ಎದೆಯಮೇಲೆ ಅಡ್ಡಲಾಗಿ ಇಟ್ಟು ಹೂ ಮತ್ತು ಹಾರಗಳಿಂದ ಅಲಂಕರಿಸಲಾಗುವುದು. ಮುಖ್ಯ ಪಾದ್ರಿ ಬೈಬಲಿನಿಂದ ಆಯ್ದ ಭಾಗಗಳನ್ನು ಪಠಿಸಿದ ಅನಂತರ ಸತ್ತ ವ್ಯಕ್ತಿಯ ಜೀವನ ಮತ್ತು ಸಾಧನೆಗಳ ಗುಣಗಾನ ಮಾಡುತ್ತಾನೆ. ಮೃತವ್ಯಕ್ತಿಯ ಬಂಧುಗಳು ಹಾಗೂ ಆಪ್ತರು ಮೃತ ವ್ಯಕ್ತಿಯನ್ನು ಅಂತಿಮವಾಗಿ ಚುಂಬಿಸಿ ಬೀಳ್ಕೊಡುಗೆಯ ಮತ್ತು ಅಗಲಿಕೆಯ ಗೀತೆ ಹಾಡುವರು. ಶವಪೆಟ್ಟಿಗೆಯನ್ನು ಮೃತವ್ಯಕ್ತಿಯ ಗಂಡು ಮಕ್ಕಳು ಹೆಗಲ ಮೇಲಿಟ್ಟುಕೊಂಡು ಇತರರ ಸಹಾಯದೊಂದಿಗೆ ಮೆರವಣಿಗೆಯಲ್ಲಿ ಸಾಗುವರು. ಮೊದಲು ಶವಪೆಟ್ಟಿಗೆಯನ್ನು ಇಗರ್ಜಿಗೆ ಒಯ್ದು ಅಲ್ಲಿಯೂ ಪ್ರಾರ್ಥಿಸಲಾಗುವುದು. ಇಗರ್ಜಿಯ ಗಂಟೆಯನ್ನು 1-11/2 ಅನುಕ್ರಮದಲ್ಲಿ ಬಾರಿಸುವರು. ಕೊನೆಯದಾಗಿ ಶವವನ್ನು ಸಮಾಧಿ ಸ್ಥಳಕ್ಕೆ ಒಯ್ಯುವರು. ಗುಂಡಿಯಲ್ಲಿ ಶವಪೆಟ್ಟಿಗೆಯನ್ನು ಇಳಿಸಿ, ನೆರೆದವರೆಲ್ಲರೂ ಅದರ ಮೇಲೆ ಹಿಡಿ ಮಣ್ಣನ್ನು ಅಥವಾ ಮರಳನ್ನು ಎಸೆಯುವರು. ಅನಂತರ ಶವವನ್ನು ಪೆಟ್ಟಿಗೆಯೊಂದಿಗೆ ಮುಚ್ಚಲಾಗುವುದು. 3ನೆಯ ಅಥವಾ 5ನೆಯ ದಿನದಂದು ಮನೆಯವರು ಬಂದು ಹೂಮಾಲೆ ಮತ್ತು ಹಾಲನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿ ನಿರ್ಗಮಿಸುವರು.

	ಜೈನ ಶವಸಂಸ್ಕಾರ ವಿಧಿಗಳು: ಮೃತಪಟ್ಟ ವ್ಯಕ್ತಿಯ ದೇಹವನ್ನು ಮೊದಲು ಒದ್ದೆ ಬಟ್ಟೆಯಲ್ಲಿ ಉಜ್ಜಿ, ಹೊಸಬಟ್ಟೆಯಿಂದ ದೇಹವನ್ನು ಮುಚ್ಚಿ, ಚಟ್ಟದ ಮೇಲೆ ಇಡುತ್ತಾರೆ. ಅದರ ಮೇಲೆ ಕಫನ್ ಎಂಬ ಬಟ್ಟೆ ಮುಚ್ಚುತ್ತಾರೆ. ಇವರಲ್ಲಿ ಸುಡುವ ಸ್ಥಳದ ಆಯ್ಕೆ ಬಹಳ ಮುಖ್ಯ. ಯಾವುದೇ ಜೀವಿಗಳಿಲ್ಲದ ಸ್ಥಳ ಆಯ್ಕೆಮಾಡುತ್ತಾರೆ. ಮರದ ತುಂಡುಗಳಿಂದ ತಯಾರಿಸಲಾದ ಎತ್ತರ ಸ್ಥಳದಲ್ಲಿ ದೇಹವನ್ನು ಇಟ್ಟು ಅದರ ಮೇಲೆ ಕರ್ಪೂರ, ತುಪ್ಪ, ಗಂಧದಪುಡಿ ಇತ್ಯಾದಿಗಳನ್ನು ಎರಚುತ್ತಾರೆ. ಅನಂತರ ಅದರ ಸುತ್ತಲೂ ಮೂರುಸಲ ಪ್ರದಕ್ಷಿಣೆ ಮಾಡಿ ನೀರನ್ನು ಸಿಂಪಡಿಸುತ್ತಾ ನಮೋರ್ಣ ಮಂತ್ರ ಪಠಿಸುತ್ತಾ ಮೃತನ ಹಿರಿಯ ಮಗ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುತ್ತಾನೆ. ಬೆಂಕಿ ಆರಿದ ಮೇಲೆ ಹಾಲು ಸುರಿದು ಅನಂತರ ಭಸ್ಮವನ್ನು ಸಂಗ್ರಹಿಸಿಕೊಳ್ಳುತ್ತಾರೆ. ಇವರು ಭಸ್ಮವನ್ನು ನದಿಯಲ್ಲಿ ವಿಸರ್ಜನೆ ಮಾಡದೆ ಗುಂಡಿ ತೋಡಿ ಹೂತು ಅದರ ಮೇಲೆ ಉಪ್ಪು ಚೆಲ್ಲಿ ಮುಚ್ಚುತ್ತಾರೆ. ಮೃತ ವ್ಯಕ್ತಿಯ ಆತ್ಮ ಕೂಡಲೇ ಪುನರ್ಜನ್ಮ ಪಡೆಯುವು ದಾಗಿ ಜೈನರು ನಂಬುತ್ತಾರೆ. ಆದ್ದರಿಂದ ಜೈನರಿಗೆ ಮರಣ ಒಂದು ಉತ್ಸವ. ಅವರಲ್ಲಿ ಅಳುವುದಾಗಲೀ ಶ್ರಾದ್ಧ ಮಾಡುವುದಾಗಲೀ ಇಲ್ಲ.

	ಸಿಖ್ಖ್‍ರ ಶವಸಂಸ್ಕಾರ ವಿಧಿಗಳು: ಸಿಖ್ಖ್ ಸಮುದಾಯದಲ್ಲಿ ವ್ಯಕ್ತಿ ನಿಧನಹೊಂದಿದ ಕೂಡಲೇ ಹದಿನಾರನೆಯ ಕೀರ್ತನೆಯನ್ನು (ಕೀರ್ತನ್ ಸೋಲಹ್) ಓದಲಾಗುವುದು. ಬಹಿರಂಗ ದುಃಖ ಪ್ರದರ್ಶನ ಮತ್ತು ಎದೆ ಬಡಿದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಶವಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಮತ್ತು ಧಾರ್ಮಿಕ ಆಯುಧವಾದ ಕಿರ್ಪಾನನ್ನು ತೊಡಿಸುತ್ತಾರೆ. ಹಿಂದುಗಳಂತೆ ಸಿಖ್ಖರೂ ಶವವನ್ನು ಸೂರ್ಯಾಸ್ತದೊಳಗೆ ಸುಡುತ್ತಾರೆ. ಮೃತನ ಹಿರಿಯ ಮಗ ಅಗ್ನಿ ಸ್ಪರ್ಶ ಮಾಡುತ್ತಾನೆ. ಪುರೋಹಿತ ಪ್ರಾರ್ಥನೆ ನೆರವೇರಿಸಿದ ಮೇಲೆ ಎಲ್ಲರೂ ಗುರುದ್ವಾರಕ್ಕೆ ತೆರಳುತ್ತಾರೆ. ಅಲ್ಲಿ ಧರ್ಮಗುರುಗಳು ಗ್ರಂಥಸಾಹಿಬ್‍ದಿಂದ ಕೆಲವು ಭಾಗಗಳನ್ನು ಪಠಿಸುತ್ತಾರೆ. ತುಪ್ಪ, ಗೋದಿಹಿಟ್ಟು, ನೀರು ಮತ್ತು ಸಕ್ಕರೆಯಿಂದ ತಯಾರಿಸಿದ ಪ್ರಸಾದವನ್ನು ಎಲ್ಲರಿಗೂ ಹಂಚುತ್ತಾರೆ. 	3ನೆಯ ದಿನ ಕುಟುಂಬದ ಸದಸ್ಯರು ಶ್ಮಶಾನಕ್ಕೆ ತೆರಳಿ ಅಸ್ಥಿ ಸಂಚಯನ ಮಾಡುತ್ತಾರೆ. ಹಾಲಿನಿಂದ ಅದನ್ನು ತೊಳೆದು, ಭಸ್ಮದೊಂದಿಗೆ ಒಂದು ಚೀಲದಲ್ಲಿ ಹಾಕಿ ಯಾವುದೇ ನದಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಶ್ರಾದ್ಧವನ್ನು ಅಥವಾ ವಾರ್ಷಿಕ ತಿಥಿಯನ್ನು ಆಚರಿಸುವ ಸಂಪ್ರದಾಯ ಸಿಖ್ಖರಲ್ಲಿಲ್ಲ. ಹತ್ತು ದಿನಗಳವರೆಗೆ ಶೋಕಾಚರಣೆ ಆಚರಿಸುತ್ತಾರೆ. ಆ ದಿನಗಳಂದು ಗ್ರಂಥ ಸಾಹಿಬ್‍ನಿಂದ ಆಯ್ದ ಭಾಗಗಳನ್ನು ಪಠನ ಮಾಡಲಾಗುವುದು.

	ಜರತುಷ್ಟ್ರ ಶವಸಂಸ್ಕಾರ ವಿಧಿಗಳು: ಭಾರತದ ಪಾರ್ಸಿ ಸಮೂಹದವರು ಜರತುಷ್ಟ್ರ ಧರ್ಮಕ್ಕೆ ಸೇರಿದವರು. ಸಾವು ಸಮೀಪಿಸುತ್ತದೆಂದು ತಿಳಿದಾಗ ಇಬ್ಬರು ಪುರೋಹಿತರನ್ನು ಮನೆಗೆ ಕರೆಸಿ ಅವರಿಂದ ಪಟೇಟ್ ಎಂಬ ಪ್ರಾರ್ಥನೆಯನ್ನು ಮಾಡಿಸುತ್ತಾರೆ. ಇದು ಪಶ್ಚಾತ್ತಾಪದ ಪ್ರಾರ್ಥನೆ. ಹವೋಮಾ ರಸದ ಕೆಲವು ಹನಿಗಳನ್ನು ಸಾಯುವ ವ್ಯಕ್ತಿಗೆ ಕೊಡಲಾಗುತ್ತದೆ. ಇತ್ತೀಚೆಗೆ ದಾಳಿಂಬೆ ಹಣ್ಣಿನ ರಸವನ್ನು ಈ ಉದ್ದೇಶಕ್ಕಾಗಿ ಉಪಯೋಗಿಸುತ್ತಾರೆ. ದೇಹವನ್ನು ಅಪವಿತ್ರವಾಗದಂತೆ ಅವರು ನಿಶ್ಶಬ್ದತೆಯ ಗೋಪುರಗಳೆಂಬ ಖಾಲಿ ಭೂಮಿಯಲ್ಲಿ ಹದ್ದುಗಳ ಆಹಾರ ವಾಗಿ ಬಿಡುತ್ತಾರೆ. ಇದರಿಂದ ದೇಹ ದೇವರಲ್ಲಿ ವಿಲೀನವಾಗುತ್ತದೆಂಬ ನಂಬಿಕೆ ಅವರಲ್ಲಿದೆ.							
	(ಎಚ್.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ